ಕೃಷ್ಣರಾಜಪೇಟೆ

ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಪಶ್ಚಿಮ ಭಾಗದಲ್ಲಿರುವ ತಾಲ್ಲೂಕು ಮತ್ತು ಆ ತಾಲ್ಲೂಕಿನ ಕೇಂದ್ರ. ಪಾಂಡವಪುರದ ರೈಲ್ವೆ ನಿಲ್ದಾಣದಿಂದ 23 ಮೈಲಿ ಮತ್ತು ಮೈಸೂರಿಗೆ 35 ಮೈಲಿ ದೂರದಲ್ಲಿದೆ. ಇದಕ್ಕೆ 1891ರವರೆಗೆ ಅತ್ತಿಗುಪ್ಪೆ ಎಂಬ ಹೆಸರಿತ್ತು. ಆಗ ಇದು ಹಾಸನ ಜಿಲ್ಲೆಗೆ ಸೇರಿತ್ತು. ಆ ವರ್ಷ ಇದಕ್ಕೆ ಕೃಷ್ಣರಾಜಪೇಟೆಯೆಂದು ನಾಮಕರಣ ಮಾಡಿ ಇದನ್ನು ಮೈಸೂರು ಜಿಲ್ಲೆಗೆ ವರ್ಗಾಯಿಸಲಾಯಿತು. 1939ರಲ್ಲಿ ಮೈಸೂರು ಜಿಲ್ಲೆಯನ್ನು ಇಬ್ಭಾಗಿಸಿ ಮಂಡ್ಯ ಜಿಲ್ಲೆಯನ್ನು ನಿರ್ಮಿಸಿದಾಗ ಇದು ಪಾಂಡವಪುರ ಉಪವಿಭಾಗಕ್ಕೆ ಸೇರಿತು. ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ 6 ಹೋಬಳಿಗಳು 286 ಹಳ್ಳಿಗಳು ಇವೆ. ಕೃಷ್ಣರಾಜಪೇಟೆ ತಾಲ್ಲೂಕಿನ ವಿಸ್ತೀರ್ಣ 350 ಚ,ಮೈ. ಜನಸಂಖ್ಯೆ 2,47757 (2001).

ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಹಲವು ಬೆಟ್ಟಗುಡ್ಡಗಳಿವೆ. ಇವುಗಳಲ್ಲಿ ಚನ್ನಗಿರಿ ಮತ್ತು ಜೆಲ್ಲಿ ಬೆಟ್ಟಗಳು ಮುಖ್ಯವಾದುವು. ಜೆಲ್ಲಿ ಬೆಟ್ಟ ಕೃಷ್ಣರಾಜಪೇಟೆಗೆ 3 ಮೈ. ದೂರದಲ್ಲಿದೆ. ಬೆಣಚುಕಲ್ಲು ಮತ್ತು ಬೂದು ಬಣ್ಣದ ಶಿಲೆಗಳು ಇಲ್ಲಿವೆ. ದಕ್ಷಿಣದ ಗವಿಬೆಟ್ಟ ಭಾಗದಲ್ಲಿ ಗಟ್ಟಿಯಾದ ಕೆಂಪು ಶಿಲೆಗಳಿವೆ. ಇದರ ಎತ್ತರ ಸಮುದ್ರ ಮಟ್ಟದಿಂದ 2,500'-3000'. 
ತಾಲ್ಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರು ಮಾರುತಗಳಿಂದ ಮಳೆಯಾಗುತ್ತದೆ. ಏಪ್ರಿಲ್‍ನಿಂದ ನವೆಂಬರ್‍ವರೆಗೆ ನೈರುತ್ಯ ಮಾರುತಗಳಿಂದ ಹೆಚ್ಚು ಮಳೆಯಾಗುತ್ತದೆ. ಅಕ್ಟೋಬರ್ ತಿಂಗಳು ಮಳೆಯ ಶಿಖರ ಮಾಸ. ಮಾರ್ಚ್-ಮೇ ತಿಂಗಳುಗಳಲ್ಲಿ ಉಷ್ಣತೆ ಹೆಚ್ಚು. ಏಪ್ರಿಲ್ ತಿಂಗಳಿನಲ್ಲಿ ಹಗಲಿನ ಗರಿಷ್ಠ ಮತ್ತು ಕನಿಷ್ಠ ಉಷ್ಣತೆಗಳು ಅನುಕ್ರವiವಾಗಿ 95( ಪ್ಯಾ. ಮತ್ತು 69.8(ಪ್ಯಾ, ಗರಿಷ್ಠ ಉಷ್ಣತೆ ಕೆಲವು ವೇಳೆ 98.6(ಪ್ಯಾ,ವರೆಗೂ ಹೆಚ್ಚಾಗಿರುವುದುಂಟು. ಡಿಸೆಂಬರ್ ತಿಂಗಳಿನಲ್ಲಿ ಉಷ್ಣತೆ 82.4(ಪ್ಯಾ,- 60.8(ಪ್ಯಾ, ಕೆಲವು ಬಾರಿ ಇದು 50(ಪ್ಯಾ,ಗೆ ಇಳಿದಿದ್ದುದುಂಟು. 
ಇಲ್ಲಿ ಮರಳು ಮಿಶ್ರಿತ ಕೆಂಪು ಮಣ್ಣಿನ ಪ್ರದೇಶ ಹೆಚ್ಚು. ಕೆಲವು ಕಡೆಗಳಲ್ಲಿ ಜೇಡಿವiಣ್ಣಿನ ನೆಲವಿದೆ. ವಿಶಾಲಪ್ರದೇಶ ಬಂಜರು ನೆಲ. ಪೊದೆ ಅಥವಾ ಕುರುಚಲು ಗಿಡಗಳಿಂದ ಕೂಡಿದ ಕಾಡುಗಳು ಅಲ್ಲಲ್ಲಿ ಕಂಡುಬರುತ್ತವೆ. ಈ ಪ್ರದೇಶದಲ್ಲಿ 3785 ಎಕರೆ ಕಾಡುಗಳು 56,789 ಎಕರೆ ಗೋಮಾಳವು ಇವೆ. ಕೃಷಿ ಯೋಗ್ಯವಲ್ಲದ ಪ್ರದೇಶ 24,344 ಎಕರೆಗಳು. 
ಕೃಷ್ಣರಾಜಪೇಟೆಯ ಮುಖ್ಯ ವೃತ್ತಿ ವ್ಯವಸಾಯ; ಶೇಕಡಾ 90ರಷ್ಟು ಜನ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಸುಮಾರು 1,10,755 ಎಕರೆ ಭೂಮಿ ಸಾಗುವಳಿಗೆ ಒಳಪಟ್ಟಿದೆ. ವ್ಯವಸಾಯ ಮಳೆಯನ್ನೇ ಬಹುವಾಗಿ ಅವಲಂಬಿಸಿದೆ. ಕೆರೆ, ಕಾಲುವೆ ಮತ್ತು ಬಾವಿಗಳು ಇವೆ. ಹೇಮಾವತಿ ಈ ಪ್ರದೇಶದ ಮುಖ್ಯವಾದ ನದಿ. ಕಾರು ಮತ್ತು ಹೈನು ಎಂಬ ಎರಡು ವಿಧವಾದ ಬೆಳೆಗಳನ್ನು ಬೆಳೆಯುವರು. ಕಾರು ಬೆಳೆ ಜೂನ್-ಜುಲೈ ತಿಂಗಳುಗಳಲ್ಲಿಯೂ ಹೈನು ಬೆಳೆ ಡಿಸೆಂಬರ್-ಜನವರಿ ತಿಂಗಳುಗಳಲ್ಲೂ ಕಟಾವಾಗುತ್ತವೆ. ರಾಗಿ, ಬತ್ತ, ಹುರುಳಿ ಮತ್ತು ಜೋಳ ಮುಖ್ಯವಾದ ಬೆಳೆಗಳು ಕಬ್ಬು, ನೆಲಗಡಲೆ, ಬಾಳೆ, ತೆಂಗು, ಹೊಗೆಸೊಪ್ಪು ಇವು ಇತರ ಮುಖ್ಯ ಬೆಳೆಗಳು. ಈ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಬನ್ನೂರು ಜಾತಿಯ ಕುರಿಗಳನ್ನು ಸಾಕುತ್ತಾರೆ. ದನ ಮತ್ತು ಕೋಳಿ ಸಾಕಣೆಯು ಸಾಕಷ್ಟು ರೂಢಿಯಲ್ಲಿದೆ.

ಸೀಳನೆರೆ ಹಳ್ಳಿಯ ಬಳಿ ಕ್ರೋಮೈಟ್ ನಿಕ್ಷೇಪಗಳಿವೆ. ಕೃಷ್ಣರಾಜಪೇಟೆಯ ಪಶ್ಚಿಮಕ್ಕೆ ಬೆಳ್ಳಿ ಬೆಟ್ಟದ ಬಳಿ ಚಿನ್ನ ದೊರೆಯುವುದೆಂದು ಭಾವಿಸಲಾಗಿದೆ. 

ಕಿಕ್ಕೇರಿ ಮತ್ತು ಸಿಂದಘಟ್ಟ ರೇಷ್ಮೆ ಬಟ್ಟೆ ತಯಾರಿಕೆಗೆ ಪ್ರಸಿದ್ಧ. ಇಲ್ಲಿ 4,400ಕ್ಕಿಂತಲೂ ಹೆಚ್ಚು ರೇಷ್ಮೆ ನೂಲಿನ ರಾಟೆಗಳಿವೆ. 

ಸಾರಿಗೆ ಸೌಲಭ್ಯ ಹೆಚ್ಚಾಗಿ ಬೆಳೆದಿಲ್ಲ. ಕೃಷ್ಣರಾಜಪೇಟೆಯಲ್ಲಿ ಹಲವು ರಸ್ತೆಗಳು ಕೂಡುತ್ತವೆ. ಕೃಷ್ಣರಾಜಪೇಟೆಗೆ ಈಶಾನ್ಯದಲ್ಲಿರುವ ಕೋಟಿಗನಹಳ್ಳಿ ಮತ್ತು ಪೂರ್ವದ ನಾಗಮಂಗಲಕ್ಕೆ ಟಾರು ರಸ್ತೆಯ ಸಂಪರ್ಕವಿದೆ. ಇದು ಬೆಟ್ಟ ಗುಡ್ಡಗಳ ಮತ್ತು ಹಸಿರು ಕಣಿವೆಗಳ ನಡುವೆ ಸಾಗುತ್ತದೆ. ಬೆಂಗಳೂರು-ನಾಗಮಂಗಲ ಬಸ್ಸುಗಳು ಕೃಷ್ಣರಾಜಪೇಟೆಯ ಮಾರ್ಗವಾಗಿ ಹೋಗುತ್ತವೆ. ಅಕ್ಕಿಹೆಬ್ಬಾಳಿಗೂ ಮೇಲುಕೋಟೆಗೂ ಹೇಮಗಿರಿಗೂ ಬಸ್ಸಿನ ಸಂಪರ್ಕವುಂಟು. ವರ್ಷಕ್ಕೊಮ್ಮೆ ಹೇಮಗಿರಿಯಲ್ಲಿ ನಡೆಯುವ ಜಾತ್ರೆಯು ಪ್ರಸಿದ್ಧವಾದ್ದು. ಅಲ್ಲಿ ದನಗಳ ವ್ಯಾಪಾರವಾಗುತ್ತದೆ. 

ತಾಲ್ಲೂಕಿನ ಕೇಂದ್ರ ಮತ್ತು ದೊಡ್ಡ ಪಟ್ಟಣ ಕೃಷ್ಣರಾಜಪೇಟೆ. ಜನಸಂಖ್ಯೆ 22,473 (2001). ಅಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಪ್ರೌಢಶಾಲೆಗಳಿವೆ.    
     					     				(ಪಿ.ಹೆಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ